ಬ್ರೌನ್, ವರ್ನರ್ ಫಾನ್
	1912-77. ಪ್ರಪಂಚದ ಮೊತ್ತ ಮೊದಲ ಯಶಸ್ವೀ ದೂರಗಾಮಿ ಕ್ಷಿಪಣಿಯನ್ನು (ಗಿ2) ಆಲೇಖಿಸಿದ ಜರ್ಮನ್-ಅಮೆರಿಕನ್ ರಾಕೆಟ್ ಪ್ರವರ್ತಕ. ಅಮೆರಿಕ ಸಂಯುಕ್ತ ಸಂಸ್ಥಾನಗಳ ನಾಸಾಸಂಸ್ಥೆ ಅಪೊಲೊ ಚಂದ್ರಯಾನಕ್ಕಾಗಿ ಬಳಸಿದ ಬೃಹತ್ ಉಡಾವಣಾ ರಾಕೆಟ್ ಸ್ಯಾಟರ್ನ್ 5ರ ನಿರ್ಮಾಣ ತಂಡದ ಮೇಲ್ವಿಚಾರಕನಾಗಿದ್ದವ. ಅಂತರಿಕ್ಷ ಸಂಶೋಧನೆಯ ಬಗ್ಗೆ ಅಗತ್ಯ ಮುನ್ಸೂಚನೆ ಮಂಡಿಸಿದ ಕಾರಣಪುರುಷ. ಈಗಿನ ಪೋಲೆಂಡಿನ ವಿರ್‍ಜಿಸ್ಕ್‍ನಲ್ಲಿ ಜನನ (23 ಮಾರ್ಚ್ 1912). ಇದು ಆಗಿನ ಜರ್ಮನಿಯ ವಿರಜಿಟ್ಸ್ ಆಗಿತ್ತು. ತಂದೆ ಬ್ಯಾರನ್ ಮ್ಯಾಗ್ನಸ್ ಫಾನ್‍ಬ್ರೌನ್ ಶ್ರೀಮಂತ ಮನೆತನದವ. ಈತ ವೀಮರ್ ಗಣರಾಜ್ಯದ ಕ್ಯಾಬಿನೆಟ್ ಸದಸ್ಯನಾಗಿಯೂ ಕೃಷಿಸಚಿವನಾಗಿಯೂ ಬ್ಯಾಂಕರನಾಗಿಯೂ ಸೇವೆಸಲ್ಲಿಸಿದ್ದ. ತಾಯಿ ಎಮ್ಮಿ ಫಾನ್ ಕ್ವಿಸ್‍ಟಾರ್ಪ್. ಸೀಗಿಸ್‍ಮುಂಡ್ ಅಣ್ಣ; ಮ್ಯಾಗ್ನಸ್ ತಮ್ಮ. ಅಣುಗ ವರ್ನರ್ ಬ್ರೌನ್ನಲ್ಲಿ ಇದ್ದ ಸುಪ್ರತಿಭೆಯನ್ನು ತಾಯಿ ಗುರುತಿಸಿ ಇವನಿಗೆ ದೂರದರ್ಶಕವೊಂದನ್ನು ನೀಡಿ ಖಗೋಳವಿಜ್ಞಾನದಲ್ಲಿ ಆಸಕ್ತಿ ವೃದ್ಧಿಗೊಳ್ಳಲು ಕಾರಣಳಾದಳು. ಹುಡುಗನಾಗಿದ್ದಾಗಲೇ ಈತ ಎಂಜಿನಿಯರಿಂಗಿನಲ್ಲೂ ಅಭಿರುಚಿ ಆಸಕ್ತಿ ಬೆಳೆಸಿಕೊಂಡಿದ್ದ.

	ಶ್ರೀಮಂತಿಕೆಗೆ ಹೆಸರಾಗಿದ್ದ ಈ ಸಂಸಾರ ಮುಂದೆ ಬರ್ಲಿನ್ನಿಗೆ ತೆರಳಿತು (1920). ಅಲ್ಲಿಯ ಶಾಲೆಯೊಂದರಲ್ಲಿ ಬ್ರೌನನ ವಿದ್ಯಾಭ್ಯಾಸ ಮುಂದುವರೆಯಿತು. ದುರದೃಷ್ಟವಶಾತ್ ಭೌತವಿಜ್ಞಾನ ಮತ್ತು ಗಣಿತವಿಜ್ಞಾನಗಳಲ್ಲಿ ಈತ ಸಾಕಷ್ಟು ಪ್ರಗತಿ ಸಾಧಿಸಲಾಗಲಿಲ್ಲ. ಯೋಗವೊ ಎಂಬಂತೆ ಹರ್ಮಾನ್ ಓಬರ್ತನ ದಿ ರಾಕೆಟ್ ಇಂಟು ಇಂಟರ್‍ಪ್ಲ್ಯಾನೆಟರಿ ಸ್ಟೇಸ್ ಪುಸ್ತಕದ ಒಂದು ಪ್ರತಿ ಇವನಿಗೆ ಲಭ್ಯವಾಯಿತು (1925). ಮುಂದಿನ ವರ್ಷಗಳಲ್ಲಿ ಬರ್ಲಿನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಸೇರಿ (1930) ಜರ್ಮನ್ ರಾಕೆಟ್ ಸೊಸೈಟಿ ಫಾರ್ ಸ್ಪೇಸ್ ಟ್ರ್ಯಾವೆಲ್‍ನ ಪ್ರಾರಂಭಿಕ ಸದಸ್ಯನಾಗಿದ್ದುಕೊಂಡು ಹರ್ಮಾನ್ ಓಬರ್ತ್ ನಡೆಸುತ್ತಿದ್ದ ದ್ರವೇಂಧನ ರಾಕೆಟ್ ಮೋಟರ್ ಪ್ರಯೋಗಗಳಲ್ಲಿ ಅವನಿಗೆ ನೆರವಾದ. ಇದೇ ಸಮಯದಲ್ಲಿ ಗ್ಲೈಡರ್‍ಹಾರಾಟ ನಡೆಸುವುದರಲ್ಲೂ ಪ್ರಾವೀಣ್ಯಗಳಿಸಿ ವಿಮಾನ ಹಾರಾಟ ನಡೆಸುವ ಪೈಲಟ್ ಪರವಾನಗಿ ಕೂಡ ಪಡೆದುಕೊಂಡ. ಮುಂದೆ ಇವನಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಬ್ಯಾಚಲರ್ ಆಫ್ ಸೈನ್ಸ್ ಪದವಿ ಲಭಿಸಿತು (1932). ಅನಂತರ ಬರ್ಲಿನ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ.

	ಜರ್ಮನ್ ರಾಕೆಟ್ ಸೊಸೈಟಿಯ ಆರ್ಥಿಕ ಪರಿಸ್ಥಿತಿ 1932ರ ಅಂತ್ಯದ ವೇಳೆಗೆ ತೀರ ಹದಗೆಟ್ಟಿತು. ದ್ರವೇಂಧನ ರಾಕೆಟ್ ಸಂಶೋಧನೆ ಮತ್ತು ಅಭಿವರ್ಧನೆ ವಿಭಾಗದ ಆಗಿನ ಮುಖ್ಯಸ್ಥನಾಗಿದ್ದ ವಾಲ್ಟರ್ ಆರ್. ಡೋರ್ನ್‍ಬರ್ಗರ್ ಎಂಬವ ಬ್ರೌನನ ಬುದ್ಧಿ ಸಾಮಥ್ರ್ಯವನ್ನೂ ಸಮರಗಳಲ್ಲಿ ದ್ರವೇಂಧನ ರಾಕೆಟ್ಟುಗಳ ಯುದ್ಧ ಸಾಮಥ್ರ್ಯವನ್ನೂ ಮನಗಂಡು ಬ್ರೌನನಿಗಾಗಿಯೇ ಜರ್ಮನಿಯ ಶಸ್ತ್ರಾಸ್ತ್ರ ವಿಭಾಗದಿಂದ ಸಂಶೋಧನಾ ಧನಸಹಾಯ ಒದಗಿಸಿದ. ಇದರಿಂದಾಗಿ ಬ್ರೌನನಿಗೆಬರ್ಲಿನ್ನಿನ ಕುಮ್ಮರ್ಸ್‍ಡಾರ್ಫ್ ಮೈದಾನದಲ್ಲಿ ರಾಕೆಟ್ಟುಗಳ ನಿರ್ಮಾಣಕೇಂದ್ರದ ಸ್ಥಾಪನೆ ಮತ್ತು ರಾಕೆಟ್ಟುಗಳ ತಾಂತ್ರಿಕಾಂಶ (ಸಾಫ್ಟ್‍ವೇರ್) ಮತ್ತು ಯಾಂತ್ರಿಕಾಂಶಗಳ (ಹಾರ್ಡ್‍ವೇರ್) ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದು ಸಾಧ್ಯವಾಯಿತು. ಈತ ಹಾಗೂ ಈತನ ಸಂಗಡಿಗರು ಎರಡು ಚಿಕ್ಕರಾಕೆಟ್ಟುಗಳನ್ನು ನೆಲದಿಂದ ಸುಮಾರು 2.5 ಕಿಮೀ ಎತ್ತರಕ್ಕೆ ಹಾರಿಸಿದರು (ಡಿಸೆಂಬರ್ 1934). ಈ ಪ್ರಾಯೋಗಿಕ ಉಡಾವಣಿಯಿಂದ ರಾಕೆಟ್ ನಿರ್ಮಾಣ ಕೇಂದ್ರದ ಹಾಗೂ ತಂಡದ ವಿಸ್ತರಣಿಗೆ ಹೆಚ್ಚಿನ ಧನಸಹಾಯ ಒದಗಿಬಂತು. ಇದೇ ವೇಳೆ ಈತನಿಗೆ ಬರ್ಲಿನ್ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಪದವಿ ಲಭ್ಯವಾಯಿತು. ಮಿಲಿಟರಿ ಸಂಶೋಧನೆಗಳ ಬಗ್ಗೆ ಗೌಪ್ಯ ಕಾಪಾಡುವುದರ ಕಾರಣವೊ ಏನೊ ಈತ ಬರೆದು ಒಪ್ಪಿಸಿದ್ದ ನಿಬಂಧಕ್ಕೆ ಎಬೌಟ್ ಕಂಬಶ್ಚನ್ ಟೆಸ್ಟ್ಸ್ ಎಂದು ಮಾತ್ರ ಹೆಸರು ನೀಡಲಾಗಿತ್ತು. ಈ ಸಂಬಂಧದಲ್ಲಿ 300 ಪೌಂಡು ಮತ್ತು 660 ಪೌಂಡು ನೂಕುಬಲದ ರಾಕೆಟ್ಟು ಎಂಜಿನ್ನುಗಳನ್ನು ಕುರಿತಂತೆ ವಿಷಯ ಪ್ರತಿಪಾದಿತವಾಗಿತ್ತು. ಬ್ರೌನ್ ಸಂಗಡಿಗರು ರಾಕೆಟ್ಟನ್ನು ಹಾರಿಸುವ ವೇಳೆಗೆ ಜರ್ಮನ್ ರಾಕೆಟ್ ಸೊಸೈಟಿ ಸಂಸ್ಥೆ ಉಳಿದಿರಲಿಲ್ಲ. ಯಾವುದೇ ಪ್ರಾಯೋಗಿಕ ರಾಕೆಟ್ ಹಾರಾಟವನ್ನಾದರೂ ಮಿಲಿಟರಿ ವಿಭಾಗದ ಮೂಲಕವೇ  ನಡೆಸಬೇಕು ಎಂಬ ತೀರ್ಮಾನವೂ ಆಗಿತ್ತು. ಮುಂದೆ ರಾಕೆಟ್ ಕೇಂದ್ರದ ಕಾರ್ಯಚಟುವಟಿಕೆಗಳೆಲ್ಲ ಬಾಲ್ಟಿಕ್ ತೀರದ ಪೀನೆಮ್ಯುಂಡೀ ಎಂಬಲ್ಲಿಗೆ ವರ್ಗವಾದುವು (1937). ಬ್ರೌನ್ ಹೊಸ ನೆಲೆಯ ತಾಂತ್ರಿಕನಿರ್ದೇಶಕನಾದ. ಪೀನೆಮ್ಯುಂಡೀ ಕೇಂದ್ರದ ಸ್ಥಾಪನೆಗಾಗಿ ಜರ್ಮನ್ ವಾಯುಪಡೆಯಿಂದ ಹಣಸಹಾಯ ಒದಗಿಬಂದಿತ್ತು. ವಾಯುಪಡೆಯ ಮುಖ್ಯಸ್ಥ ಮೇಜರ್ ಫಾನ್ ರಿಚ್‍ತೋಫೆನ್ ಎಂಬವ ಜೆಟ್‍ವಿಮಾನಗಳ ನಿರ್ಮಾಣದ ವಿಷಯದಲ್ಲಿ ಬ್ರೌನನ ಹೆಸರನ್ನು ಕಾಣಿಸಿದ್ದೂ ಈ ವರ್ಗಾವಣಿಗೆ ಅನುಕೂಲ ಸನ್ನಿವೇಶ ಒದಗಿಸಿತ್ತು. ಡೋರ್ನ್‍ಬರ್ಗರ್‍ನ ಮಿಲಿಟರಿ ಮುಖಂಡತ್ವದಲ್ಲಿ ಮತ್ತು ಬ್ರೌನನ ತಾಂತ್ರಿಕ ನಿರ್ದೇಶಕತ್ವದಲ್ಲಿ ಪೀನೆಮ್ಯುಂಡೀ ನೆಲೆಯಿಂದ ದ್ರವೇಂಧನ ಭರಿತ ಹಾಗೂ ಜೆಟ್ ತಂತ್ರಾಧಾರಿತ ರಾಕೆಟ್ಟುಗಳ ಉಡಾವಣಿಗಳು ಯಶಸ್ವಿಯಾಗಿ ನಡೆದುವು. ದೂರಗಾಮಿ ಪ್ರಕ್ಷೇಪಕ ಕ್ಷಿಪಣಿಗಳೂ (ಂ ಶ್ರೇಣಿಯವು) ಅತಿಶಬ್ದ ಪ್ರತಿವಿಮಾನ ಪ್ರಕ್ಷೇಪಕ ಕ್ಷಿಪಣಿಗಳೂ (ರಾಸರ್ ಫಾಲ್) ರೂಪುಗೊಂಡವು. ಆಗ ಯೂರೊಪಿನ ಬಹುತೇಕ ರಾಷ್ಟ್ರಗಳಲ್ಲಿ ಎರಡನೆಯ ಮಹಾಯುದ್ಧದ ಭೀಕರತೆ ಕಾಣಿಸುತ್ತಿತ್ತು. ಅಸ್ತ್ರಪ್ರತ್ಯಸ್ತ್ರಗಳ ತಯಾರಿಕೆ ಹಾಗೂ ಪ್ರಯೋಗಗಳು ನಡೆದಿದ್ದುವು. ಅಗತ್ಯಕ್ಕೆ ಅನುಗುಣವಾಗಿ ರಾಕೆಟ್ಟುಗಳ ದೂರಗಮನ ಸಾಮಥ್ರ್ಯವನ್ನೂ ಕಾರ್ಯತತ್ಪರತೆಯನ್ನೂ ಉತ್ತಮಪಡಿಸುವ ಕಾರ್ಯಚಟುವಟಿಕೆಗಳು ನಡೆದಿದ್ದವು. ಂ ಶ್ರೇಣಿಯಲ್ಲಿ ನಿರ್ಮಾಣಮಾಡಿದ ಂ3 ಮತ್ತು ಂ5 ರಾಕೆಟ್ಟುಗಳಿಂದಾಗಿ ಂ4 ಎಂಬ ದೈತ್ಯರಾಕೆಟ್ಟಿನ ಜೋಡಣೆ ಮತ್ತು ಹಾರಾಟಗಳಿಗೆ ಅನುಕೂಲ್ಯ ಒದಗಿತು. ಂ4 ಕ್ಷಿಪ್ರಣಿಗೆ ಪ್ರಸಾರ ಸಚಿವಾಲಯ ಗಿ2 ಎಂದು ನಾಮಕರಣಮಾಡಿತು (ವೆಂಜಿನ್‍ಸಿ ವೆಪನ್ 2). 1944ರ ಹೊತ್ತಿಗೆ ಪೀನೆಮ್ಯುಂಡೀ ನೆಲೆಯ ರಾಕೆಟ್ ತಂತ್ರವಿದ್ಯೆಯ ಮಟ್ಟ ಪ್ರಪಂಚದ ಇನ್ನಿತರ ರಾಷ್ಟ್ರಗಳಿಗಿಂತಲೂ ಬಲು ಹೆಚ್ಚಾಗಿತ್ತು. 46ಮೀ ಎತ್ತರ, 12,240 ಕೆಜಿ ತೂಕದ ಂ4 ರಾಕೆಟ್ ನೆಲದಿಂದ 96 ಕಿಮೀ ಎತ್ತರಕ್ಕೆ ಹಾರಿ 4800ಕಿಮೀ, ಗಂ ವೇಗದಿಂದ ಸುಮಾರು 193 ಕಿಮೀ ದೂರ ಕ್ರಮಿಸಿತ್ತು. ಇದೇ ಪ್ರಪಂಚದ ಮೊತ್ತಮೊದಲ ನಿರ್ದೇಶಿತಕ್ಷಿಪಣಿ. ಎರಡನೆಯ ಮಹಾಯುದ್ಧ ಮುಗಿಯುವ ವೇಳೆಗೆ ಇಂಥ 5000ಕ್ಕೂ ಹೆಚ್ಚಿನ ಕ್ಷಿಪಣಿಗಳನ್ನು ತಯಾರಿಸಲಾಗಿತ್ತು. ಇವುಗಳ ಪೈಕಿ ಸಹಸ್ರಾರನ್ನು ಇಂಗ್ಲೆಂಡ್ ಮತ್ತು ಯೂರೊಪಿನ ಶತ್ರ್ರುಲಕ್ಷ್ಯಗಳತ್ತ ಹಾರಿಸಲಾಗಿತ್ತು ಕೂಡ. ಆ ವೇಳೆಗೆ ಆಕಾಶಸಂಶೋಧನೆಯ ಸಲುವಾಗಿ ಮಾತ್ರ ಬ್ರೌನ್ ರಾಕೆಟ್ಟುಗಳನ್ನು ಕುರಿತಂತೆ ಸಂಶೋಧನೆ ಮಡುತ್ತಿರುವನೆಂದೂ ಅವನ್ನು ಸಮರಾಸ್ತ್ರಗಳಾಗಿ ಬಳಸುವಲ್ಲಿ ಇವನಿಗೆ ಆಸಕ್ತಿ ಇಲ್ಲವೆಂದೂ ಆರೋಪ ಹೊರಿಸಿ ಜರ್ಮನಿಯ ಗುಪ್ತಕೂಟ (ಸೀಕ್ರೆಟ್ ಸರ್ವಿಸ್ SS) ಇವನನ್ನು ದಸ್ತಗಿರಿ ಮಾಡಿ ಕೆಲಕಾಲ ಬಂಧನದಲ್ಲಿಟ್ಟಿತು. ಇದು ಭಾಗಶಃ ನಿಜ ಆಗಿತ್ತು ಕೂಡ. ಯುದ್ಧ ಮುಗಿದ ಅನಂತರ ಬ್ರೌನ್ ಮುಖಂಡತ್ವದ ರಾಕೆಟ್ ನಿರ್ಮಾಣ ತಂಡ ಉತ್ತಮತರ ಹಾಗೂ ಮನುಷ್ಯಚಾಲಿತ, ಎರಡು ಹಂತದ 1130 ಕೆಜೆ ಪಾವತಿಹೊರೆಯನ್ನು ಭರಿಸುವ ರಾಕೆಟ್ಟುಗಳನ್ನೂ ಭೂಮಿ ಸುತ್ತಲೂ ಕಕ್ಷಿಸುವಂಥ ರಾಕೆಟ್ಟುಗಳನ್ನೂ ಮಾನವ ಹಾರಾಟಗಳಿಗಾಗಿ ಮೂರು ಹಂತದ ಉಡಾವಣಾ ರಾಕೆಟ್ಟುಗಳನ್ನೂ ರೂಪಿಸಿತ್ತು. ಇವಲ್ಲದೆ ತೂಕದ ಕೃತಕ ಭೂಉಪಗ್ರಹಗಳನ್ನು ಭೂಕಕ್ಷೆಗೆ ತೂರಲು ಸಾಧ್ಯವಾಗುವಂಥ, 1.2 ದಶಲಕ್ಷ ಕೆಜಿ ನೂಕುಬಲವಿರುವ, ನಾಲ್ಕು ಹಂತದ ವಾಹನವನ್ನೂ ಆಲೇಖಿಸಿತ್ತು.

	ಎರಡನೆಯ ಮಹಾಯುದ್ಧ ಮುಗಿಯುವ ಹೊತ್ತಿಗೆ ಅಮೆರಿಕ ಪಡೆಯವರದೇ ಯುದ್ಧದಲ್ಲಿ ಮೇಲುಗೈಯಾಗಿ ಬ್ರೌನ್ ಮತ್ತು ಸಂಗಡಿಗರು ಮುನ್ನಡೆಯುತ್ತಿದ್ದ ಅಮೇರಿಕನ್ ಪಡೆಗೆ ಶರಣಾದರು. ಜರ್ಮನ್ ತಂತ್ರವಿದರನ್ನೂ ಅವರ ಇಡೀ ಸಾಧನ ಸಲಕರಣೆಗಳನ್ನೂ ಅಮೇರಿಕನ್ ಮತ್ತು ಸೋವಿಯತ್ ಪಡೆಗಳು ವಶಪಡಿಸಿಕೊಂಡವು. ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯದ ಹ್ವೈಟ್ ಸ್ಯಾಂಡ್ಸ್ ಪರೀಕ್ಷಾ ನೆಲೆಗೆ ಬ್ರೌನನನ್ನು ವರ್ಗಾಯಿಸಲಾಯಿತು. ಗಿ2 ರಾಕೆಟ್ಟಿನ ಸಹಾಯದಿಂದ ಉನ್ನತ ವಾಯುಮಂಡಲವನ್ನು ಅಧ್ಯಯನ ಮಾಡುವ ಸಲುವಾಗಿ ಅನೇಕ ಪರಿಜ್ಞಾಪೀ ಪ್ರಯೋಗಗಳನ್ನು ನಡೆಸಲಾಯಿತು. ಬ್ರೌನ್ ಮತ್ತು ಈತನ 130 ಮಂದಿ ಪೀನೆಮ್ಯುಂಡೀ ನೆಲೆಯ ಅನುಯಾಯಿಗಳ ತಂಡ ಅಲಬಾಮ ರಾಜ್ಯದ ಹಂಟ್ಸ್‍ವಿಲ್ ಎಂಬಲ್ಲಿಗೆ ತೆರಳಿತು. ಸೇನಾಪಡೆಗೆ ಸೇರಿದ ನಿರ್ದೇಶಿತ ಕ್ಷಿಪಣಿಯೋಜನೆಯ ಕಾರ್ಯನಿರ್ವಹಣೆಯ ಭಾರವನ್ನು ತಂಡ ಹೊರಬೇಕಾಯಿತು. ಬ್ರೌನ್ ಇಲ್ಲಿ ರೆಡ್‍ಸ್ಟೋನ್ ಎಂಬ ಹೆಸರಿನ ರಾಕೆಟ್ಟನ್ನು ರೂಪಿಸಿದ. ಮುಂದೆ ಇದನ್ನು ಅಮೆರಿಕ ನಡೆಸಿದ ಅರ್ಧಕಕ್ಷೀಯ ಹಾರಾಟದಲ್ಲಿ ಬಳಸಿಕೊಳ್ಳಲಾಯಿತು. ಮುಂದೆ ಜೂಪಿಟರ್ ಮತ್ತು ಜೂನೋ ರಾಕೆಟ್ಟುಗಳು ನಿರ್ಮಾಣಗೊಂಡು ಅಮೆರಿಕದ ಉಪಗ್ರಹಗಳ ಉಡಾವಣೆÂಗೆ ಅನುಕೂಲವಾಯಿತು. ಬ್ರೌನ್ ತಂಡ ಅಮೆರಿಕದ ಮೊತ್ತಮೊದಲ ಉಪಗ್ರಹ ಎಕ್ಸ್‍ಪ್ಲೋರರ್ 1ನ್ನು 1958 ಜನವರಿ 31ರಂದು ಉಡಾಯಿಸಿತು.

	ರಾಕೆಟ್ ತಂತ್ರವಿದ್ಯೆಯಲ್ಲಿ ಪ್ರಾವೀಣ್ಯಗಳಿಸಿದ್ದ ಬ್ರೌನ್ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಸಂಸ್ಥೆ ಸೇರಿ (1960) ಮುಂದೆ ಹಂಟ್ಸ್‍ವಿಲ್‍ನಲ್ಲಿಯ ಜಾರ್ಜ್‍ಸಿ, ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರಿನ ನಿರ್ದೇಶಕನಾದ. ರೆಡ್‍ಸ್ಟೋನ್ ಮತ್ತು ಜೂಪಿಟರ್ ರಾಕೆಟ್ಟುಗಳ ನಿರ್ಮಾಣ ಮತ್ತು ಉಡಾವಣೆಗಳಿಂದ ಕುಮ್ಮಕ್ಕು ಪಡೆದ ಬ್ರೌನ್ ತಂಡ ಮುಂದೆ ಸ್ಯಾಟರ್ನ್ ಶ್ರೇಣಿಯ ರಾಕೆಟ್ಟುಗಳ ನಿರ್ಮಾಣಕ್ಕೆ ಕೈಹಾಕಿತು. ಸ್ವಾಟರ್ನ್ 1ಃ ರಾಕೆಟ್ಟನ್ನು ಅಪೊಲೊ ಕೋಶಗಳನ್ನು ಭೂಕಕ್ಷೆಗೆ ತೂರಲು ಬಳಸಿಕೊಳ್ಳಲಾಯಿತು. ಮುಂದೆ ಸ್ಯಾಟರ್ನ್ 5 ಎಂಬ ಹೆಸರಿನ ದೈತ್ಯರಾಕೆಟ್ಟಿನ ನಿರ್ಮಾಣ ಆಯಿತು. ಇದು 140 ಟನ್ ಪಾವತಿ ಹೊರೆಯನ್ನು ಭೂಕಕ್ಷೆಯಲ್ಲಿ ಇರಿಸುವ ಇಲ್ಲವೆ 47 ಟನ್ ಪಾವತಿಹೊರೆಯನ್ನು ಚಂದ್ರನಲ್ಲಿಗೆ ಕಳುಹಿಸುವ ಸಾಮಥ್ರ್ಯ ಹೊಂದಿತ್ತು. ಇವೆಲ್ಲ ಬ್ರೌನನ ನಿಷ್ಠೆ, ನಿರ್ದೇಶನ ಹಾಗೂ ಆಸಕ್ತಿಗಳ ಪ್ರಕಟಿತ ರೂಪವಾಗಿದ್ದು ಅಂತರಿಕ್ಷ ಸಂಶೋಧನೆಗೆ ಹೆಚ್ಚಿನ ಅನುಕೂಲ್ಯ ಒದಗಿಸಿದುವು. 1970ರಲ್ಲಿ ಬ್ರೌನನನ್ನು ವಾಷಿಂಗ್ಟನ್ನಿನಲ್ಲಿಯ ನಾಸಾಕೇಂದ್ರ ಕಚೇರಿಗೆ ವರ್ಗಾಯಿಸಲಾಯಿತು. ಆ ಸಂಸ್ಥೆಯ ಉಪಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಮತ್ತು ಮುಂದಿನ ಅಂತರಿಕ್ಷ ಯೋಜನೆಗಳಿಗೆ ಸುಭದ್ರ ತಳಹದಿಹಾಕಿದ.

	1972ರಲ್ಲಿ ಬ್ರೌನ್ ನಾಸಾ ಸಂಸ್ಥೆಯಿಂದ ನಿವೃತ್ತನಾಗಿ ಫೇರ್‍ಚೈಲ್ಡ್ ಇಂಡಸ್ಟ್ರೀಸ್ ಇನ್‍ಕಾರ್ಪೋರೇಟೆಡ್ ಎಂಬ ಖಾಸಗಿ ಸಂಸ್ಥೆಗೆ ಉಪಾಧ್ಯಕ್ಷನಾಗಿ ಪ್ರಪಂಚದ ಸಮಸ್ಯೆಗಳಿಗೆ ಉಪಗ್ರಹಗಳ ಅನ್ವಯದಿಂದ ಪರಿಹಾರ ಕಂಡುಕೊಳ್ಳುವ ಕೆಲಸದಲ್ಲಿ ನಿರತನಾದ.

	ನೀರಿನ ಆಳದಲ್ಲಿ ಈಜುವುದು, ದೋಣಿ ನಡೆಸುವುದು, ಪ್ರವಾಸ ಕೈಗೊಳ್ಳುವುದು ಇವೆಲ್ಲ ಈತನಿಗೆ ಸಂತಸ ತರುತ್ತಿದ್ದ ಹವ್ಯಾಸಗಳೂ. ಇವನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಇದ್ದಾರೆ. ದೈವದ ಇರುವಿಕೆಯ ಬಗ್ಗೆ ಗಾಢವಿಶ್ವಾಸ ಹೊಂದಿದ್ದ ಈತ ವಿಶ್ವಸಿದ್ಧಾಂತದಲ್ಲೂ ನಂಬಿಕೆಯಿಟ್ಟಿದ್ದ.

	ಬ್ರೌನನಿಗೆ ಸಂದ ಗೌರವಗಳು ಹಲವಾರು. ಅಮೆರಿಕ ಸರ್ಕಾರದ ಇಲಾಖೆಗಳಿಂದಲೂ ವೃತ್ತಿಪರ ಸಂಘಗಳಿಂದಲೂ ವಿದೇಶಗಳಲ್ಲಿಯ ಸಂಘಸಂಸ್ಥೆಗಳಿಂದಲೂ ಗೌರವಗಳು ಪ್ರಾಪ್ತಿಯಾಗಿದ್ದುವು.

	ಈತ ಮತ್ತು ಈತನ ಸಂಗಡಿಗರು ರಚಿಸಿದ ಗ್ರಂಥಗಳು: ಅಕ್ರಾಸ್ ದಿ ಸ್ಪೇಸ್ ಫ್ರಾಂಟಿಯರ್ (1952); ಕಾನ್‍ಕ್ವೆಸ್ಟ್ ಆಫ್ ದಿ ಮೂನ್ (1953); ಎಕ್ಸ್‍ಪ್ಲೊರೇಷನ್ ಆಫ್ ಮಾರ್ಸ್ (1956); ಫಸ್ಟ್ ಮೆನ್ ಟು ದಿ ಮೂನ್ (1960); ಮೂನ್ (1970). *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ